‘ರಾಮನೂ ನಮ್ಮ-ನಿಮ್ಮಂತೆ ಮನುಷ್ಯ, ನಮಗಿಂತ ಹೆಚ್ಚು ಸಾಧನೆ ಮಾಡಿ ಪುರುಷೋತ್ತಮನಾದವ’ ಎನ್ನುವ ವಾದವೊಂದು ಪ್ರಚಲಿತವಾಗಿದೆ. ಈ ವಾದ ಮಾಡುವವರು ‘ರಾಮಾಯಣದಲ್ಲಿ ವಾಲ್ಮೀಕಿಗಳು ರಾಮ ದೇವರು ಎಂದಿಲ್ಲ’ ಎಂದು ಹೇಳುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ರಾಮಾಯಣ, ಹೆಜ್ಜೆ ಹೆಜ್ಜೆಗೆ ರಾಮನ ದಿವ್ಯತೆಯನ್ನು ಗುರುತಿಸುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವಾಗಿ, ಇನ್ನು ಕೆಲವೊಮ್ಮೆ ಪರೋಕ್ಷವಾಗಿ ಅದು ಕಾಣಸಿಗುತ್ತದೆ. ಅದನ್ನು ಸಾಧಿಸುವ ಸತ್ಕಾರ್ಯವನ್ನು ಈ ಕೃತಿ ಮಾಡಿದೆ.
ರಾಮಾಯಣದ ಶ್ಲೋಕಗಳನ್ನು ಉಲ್ಲೇಖಿಸುತ್ತಾ, ಅದರ ಆಶಯವನ್ನು ವಿವರಿಸುತ್ತಾ, ತರ್ಕಬದ್ಧವಾಗಿ ಸಾಗುವ ಈ ಕೃತಿ, ಶಾಸ್ತ್ರೀಯ ಕ್ರಮದ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಇಲ್ಲಿ ಕಲ್ಪನೆಯಿಲ್ಲ, ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ರಾಮಾಯಣದಲ್ಲಿದೆ ಎನ್ನುವ ಅಪಭ್ರಂಶವಿಲ್ಲ, ತನಗನ್ನಿಸಿದ್ದೇ ಸತ್ಯ ಎಂದುಕೊಳ್ಳುವ ಅಹಂಕಾರವೂ ಇಲ್ಲ. ಋಷಿಹೃದಯದ ಒಳಹೊಕ್ಕು, ಆ ಆರ್ಷತನವನ್ನು ಆಸ್ವಾದಿಸುತ್ತಾ, ಸತ್ಯವನ್ನು ಮಾತ್ರ ಹೇಳುತ್ತೇನೆ ಎನ್ನುವ ವಿನಯಪೂರ್ವಕವಾದ ದಿಟ್ಟತನ ಕೃತಿಯಲ್ಲಿದೆ.
ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ 39ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ, ಮದ್ರಾಸು ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ, ಬಹುಶ್ರುತ ವಿದ್ವಾಂಸರಾದ ಡಾ. ಕೆ. ಎಸ್. ಕಣ್ಣನ್ ಅವರು ರಚಿಸಿರುವ, ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಪ್ರತಿಗಳಿಗಾಗಿ ಶ್ರೀಪುಸ್ತಕಮ್ (9591542454) ಸoಪರ್ಕಿಸಬಹುದಾಗಿದೆ.
“ಶ್ರೀರಾಮ, ಶ್ರೀಮನ್ನಾರಾಯಣನ ಅವತಾರ. ವಾಲ್ಮೀಕಿ ರಾಮಾಯಣ ಇದನ್ನು ಬಗೆಬಗೆಯಾಗಿ ತೋರಿಸಿಕೊಡುತ್ತದೆ. ವ್ಯಕ್ತವಾಗಿಯಲ್ಲದೇ ರಾಮಾಯಣದ ಅಂತಃಸೂತ್ರವೇ ಇದಾಗಿದೆ. ವೈಕುಂಠದಿಂದ ಆರಂಭವಾಗಿ ಮತ್ತೆ ವೈಕುಂಠವನ್ನು ಸೇರುವುದೇ ರಾಮನ ಅಯನ. ಈ ಅಯನ ಜೀವಿಗಳೆಲ್ಲರದ್ದೂ ಆಗಬೇಕೆನ್ನುವುದೇ ರಾಮಾಯಣದ ಸಂದೇಶ, ಶ್ರೀರಾಮನ ಅವತಾರವೂ, ಶ್ರೀಮದ್ರಾಮಾಯಣದ ಅವತಾರವೂ ಈ ಉದ್ದೇಶದ್ದೇ ಆಗಿದೆ. ಇದೀಗ ರಾಮನೇನು ದೇವನೇ? ಕೃತಿ ವಾಲ್ಮೀಕಿಗಳು ರಾಮಾಯಣದಲ್ಲಿ ಎಲ್ಲೆಲ್ಲಿ ಈ ಅಂಶವನ್ನು ಪ್ರಸ್ತುತಪಡಿಸಿದ್ದಾರೆ ಎನ್ನುವುದನ್ನು ಸಾಧಾರವಾಗಿ ನಿರೂಪಿಸಿದೆ.
– ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ